Blogs
ಚನ್ನಯ್ಯ ರಂಗಮಂದಿರದಲ್ಲಿ ಚನ್ನಾದ ನಾಟಕ- ಅಯೋಮಯ.
ಕೋಲಾರ ಜಿಲ್ಲೆಯ ಸಾಂಸ್ಕೃತಿಕತೆ, ಅದರ ಬಾಹುಳ್ಯ ಅಬ್ಬರದ್ದಲ್ಲ,ಸಾಗರೋಪಾದಿಯ ಭೋರ್ಗರೆತದ ಉಬ್ಬರವೂ ಅಲ್ಲ, ಕ್ಷಕಿರಣದಂತೆ ಆಗಾಗ ರಂಗಾಸಕ್ತ ಮನಸ್ಸುಗಳನ್ನು ಬೆಸೆಯುವ ಕಾಳಜಿಯುಳ್ಳದ್ದು ಎಂಬುದನ್ನು ಈ ಸಲ ಚಾಂದಿನಿ ತಂಡ ಬಹಳ ಅಚ್ಚುಕಟ್ಟಾಗಿ ಅಯೋಮಯ ಎಂಬ ನಾಟಕದ ಮೂಲಕ ಸಾದರಪಡಿಸಿ ಸಾರ್ಥಕಪಡಿಸಿತು.
ವಾಸ್ತವದಲ್ಲಿ ಗೌರೀಶ ಜೋಶಿಯವರ ನಾಟಕ ಅಯೋಮಯ ನಾವು ನಮ್ಮ ಪ್ರಸ್ತುತ ಸಾಮಾಜಿಕ ಪರಿಚಲನೆಯಲ್ಲಿ ಕಟ್ಟಿಕೊಂಡು ಬಾಳುತ್ತಿರುವ ಹುಸಿಭ್ರಮೆಗಳ ಒಂದು ಲೋಕವನ್ನೇ ಮುಖಾಮುಖಿಯಾಗಿಸುತ್ತದೆ. ತಿಳಿ ಹಾಸ್ಯ ತೆಳು ನಗುವಿನ ಲೇಪನದಿಂದ ವಿಷಾದದ ಒಳಸೆಲೆಗಳನ್ನು ಗರ್ಭೀಕರಿಸಿಕೊಂಡಿರುವ ಈ ನಾಟಕದ ಸರ್ವ ಪಾತ್ರಗಳೂ ಸಹ ನಾವೇ ಬದುಕುತ್ತಿರುವ ಭ್ರಾಮಕ, ವಿಭ್ರಾಂತ ತಲ್ಲಣಗಳ ಪ್ರತಿನಿಧಿಯಾಗಿ ಗಮನಸೆಳೆಯುತ್ತವೆ.
ಈ ನಾಟಕದ ಕೇಂದ್ರ ಪಾತ್ರ ಜಾನಕೀರಾಮನ ದ್ವಂದ್ವ ಅವನ ಕುಟುಂಬಕ್ಕೂ ಸಾಂಕ್ರಾಮಿಕವಾಗಿ ಹಬ್ಬಿ ಹರಡಿ ವ್ಯಾಪಿಸಿದೆ.
ಕಲ್ಪಿತ ವಾಸ್ತವಗಳ ಅವಾಸ್ತವಿಕ ಅಸಮರ್ಥನೀಯ ಜಗತ್ತಿಗೆ ನಮ್ಮನ್ನು ನಾವು ಒಪ್ಪಿಸಿಕೊಂಡು ಒಡ್ಡಿಕೊಂಡು ಒಳನುಗ್ಗಿಬಿಟ್ಟಿದ್ದೇವೆ ಎನ್ನುವುದನ್ನು ತನ್ನದೇ ಆದ ತೊಳಲಾಟ ತುಮುಲಗಳಲ್ಲಿ ಜಾನಕೀರಾಮ ಆವರಿಸಿಕೊಳ್ಳುತ್ತಾನೆ. ಜಾನಕೀರಾಮನ ಪಾತ್ರಧಾರಿ ಚನ್ನಕೇಶವರ ಪಾತ್ರ ಬಹಳ ಸಹಜವಾಗಿ ಗಮನೀಯ ವಾಗುವುದು ಈ ಕಾರಣದಿಂದ.
ಇವನ ಹೆಂಡತಿ ಸಹ ಅಯೋಮಯ ಸ್ಥಿತಿಯವಳೇ, ಈ oscillation ಅವಳನ್ನೂ ಕಾಡುತ್ತದೆ. ಗಂಡನ ಮನೋಚಾಂಚಲ್ಯ, ದ್ವಂದ್ವ ಅವಳಿಗೆ ಏಕೆ ಅರ್ಥವಾಗುವುದಿಲ್ಲ ಎಂದರೆ ಅದನ್ನು ಅವಳು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದೇ ಇಲ್ಲ ಎಂಬುದರಲ್ಲಿ ಇದರ ನಿಜವಾದ ವಿಷಾದ ಅಡಗಿದೆ.ಇಲ್ಲಿ ಪತ್ನಿಯೂ ಸಹ ಇಬ್ಬಗೆಯ ಅತಂತ್ರ ಮನಸ್ಥಿತಿಯ ಹೆಣ್ಣು. ಪಕ್ಕದ ಮನೆಯವಳ ಮಾತನ್ನು ಸ್ವೀಕರಿಸುವ, ನಿಧಿ, ಕಾಳಮ್ಮ ಮೊದಲಾದ ಸುಳ್ಳು ಪ್ರಪಂಚದ ಬೆರಗಿಗೆ ಮರುಳಾಗಿಬಿಡುವ ಅಪಕ್ವತೆಯನ್ನು ಆ ಪಾತ್ರಧಾರಿ ಬಹಳ ಸಂಯಮದಿಂದ ನಿರ್ವಹಣೆ ಮಾಡಿದ್ದಾರೆ.
ಮಗಳು ಇವತ್ತಿನ ಜಗದ ಚಿತ್ತಾಕರ್ಷಕ ಮೆರುಗಿನ ರಂಗುರಂಗಾದ ಸೆಳೆತವನ್ನೇ ನಿಚ್ಚಳ ಸತ್ಯವೆಂದು ಭಾವಿಸಿ ಬಾಳುವವಳಾದರೆ ಮಗ ಆದರ್ಶ ದಂಪತಿಗಳಾಗಲು ಹೆಂಡತಿಯನ್ನು ಬಿಟ್ಟು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ಕ್ರಿಯೆ ಮನದಾಳದ ವಿಷಣ್ಣತೆಗೆ ಕಾರಣವಾಗುತ್ತದೆ. ಏಕೆಂದರೆ ಬಾಂಧವ್ಯ , ದಾಂಪತ್ಯಗಳು ವ್ಯಾಪಾರೀಕರಣ, ಹಣದ ಪ್ರಪಂಚದ ಸ್ವತ್ತಾಗಿ ಚಿರವಾಗಿ ಇರಬೇಕಾದ ಸಂಬಂಧಗಳು ಹೀಗೆ ಕೃತಕ ಹೊಂದಾಣಿಕೆಯನ್ನು ಹೊಂದುವ ಕ್ರಿಯೆ ಆಳದಲ್ಲಿ ಗಂಭೀರ ಚಿಂತನೆ ಮತ್ತು ಪ್ರಶ್ನಾರ್ಹತೆಯನ್ನು ಉಳಿಸಿಬಿಡುತ್ತದೆ.ಹೀಗಾಗಿ ಈ ಅಂಶ ನಾಟಕದಲ್ಲಿ ಹಾಸ್ಯದ ಪಾತಳಿಯನ್ನು ಹೊಂದಿಯೂ ನಿಜ ಅರ್ಥದಲ್ಲಿ ಗಹನ ಮತ್ತು ಚಿಂತಾಕ್ರಾಂತತೆಗೆ ಈಡು ಮಾಡುವಂಥದ್ದು.
ಧಾರಾವಾಹಿಗಳ ದೃಶ್ಯ ಪ್ರಪಂಚಕ್ಕೆ ಆತುಕೊಂಡು ಮಾತನಾಡುವ ಪಾತ್ರಗಳು ವಿಡಂಬನಾತ್ಮಕ ಕಟು ಸತ್ಯ. ತುರುಸಿನ ಜೀವನವಿಧಾನವನ್ನೇ ನೈಜವೆಂದು ಭಾವಿಸಿ ಬುದ್ಧಿ ಭಾವ ಎರಡನ್ನೂ ವ್ಯತಿರಿಕ್ತವಾಗಿ ಬಳಸಿ ಬಾಳುತ್ತಿರುವ ದುರಂತ ಪ್ರಹಸನದ ತಿರುಳನ್ನು ಜಾನಕೀರಾಮನ ಕುಟುಂಬ ಒಟ್ಟು ಪ್ರಸ್ತುತ ಸಮಾಜದ ಸಂಕೇತವಾಗಿ ಒಳಗೊಂಡಿದೆ.
ವಿಕಲ್ಪ ವಿಕ್ಷಿಪ್ತತೆಯಲ್ಲಿ ನಾನು ನಿಮ್ಮೆಲ್ಲರ ಧ್ವನಿ, ನಿಮ್ಮೊಳಗೆ ,ಎಲ್ಲರೊಳಗೂ ಇದ್ದೇನೆ ಎಂಬ ಸ್ತ್ರೀ ಪಾತ್ರ ಈ ನಾಟಕದ ಜೀವಾಳ. ಅಯೋಮಯದ ತಿರುಳೂ ಇದೇ ಆಗಿದೆ. ಹಾಸ್ಯವಿದ್ದರೂ ಹಾಸ್ಯವಲ್ಲದ, ಮೊನಚು ಮಾತುಗಳಿಲ್ಲದೆಯೂ ಸಂಕೀರ್ಣ ಮಾದರಿಯ ಸಂಗತಿಗಳನ್ನು ಹೇಳಲು ಸಾಧ್ಯವೆಂಬ ಅಂಶಗಳನ್ನು ಧ್ವನಿ,ರಾಜಕಾರಣಿ ಹೋರಾಟಗಳ ಹೆಸರಿನಲ್ಲಿ ಲಾಬಿ,ಲಾಭ, ಅಧಿಕಾರ ದಾಹದ ಪ್ರತೀಕ ಎಲ್ಲವೂ ಅಯೋಮಯ ನಾಟಕವನ್ನು ಜೀವಂತವಾಗಿರಿಸಿದೆ. ಶತಶತಮಾನ ಗಳಿಂದ,ಶತಶತಮಾನಗಳಿಂದ…ಎಂದು ಬರುವ ಬಾಡಿಗೆದಾರ ಅಧೀನತೆಗೆ ಒಳಪಟ್ಟವನಾಗಿದ್ದಾನೆ.
ತಣ್ಣಗಿನ ಸಂಘರ್ಷವನ್ನು ಹುಟ್ಟು ಹಾಕಿರುವ ಅಯೋಮಯ ನಾಟಕ ಬುಡುಬುಡಿಕೆಯವನ ಮೂಲಕವೂ ಇಬ್ಬಂದಿತನದ ಸ್ಥಿತಿಗಳನ್ನು ನಿರ್ದೇಶಿಸಿಕೊಳ್ಳುತ್ತದೆ. ಮಗನ ಅತಿ ವ್ಯಾಮೋಹಿತ ದೃಶ್ಯಜಗದ ವ್ಯಾಮೋಹ ಇವತ್ತಿನ ವರ್ತಮಾನದ ಕಂಡೂ ಕಾಣದ ಮೌನ ಸಮ್ಮತಿಯ ವ್ಯಂಗ್ಯದ ಉತ್ಕಂಠಿತ ಸ್ಥಿತಿ.ಈ ಉತ್ಕರ್ಷದ ಪರಮೋಚ್ಚ ತುದಿಯಲ್ಲಿ ಯುವಸಮೂಹದ ಗುಂಗು ಬೆಚ್ಚಿಬೀಳಿಸುವಷ್ಟು ಎಚ್ಚರವನ್ನು ಬೇಡುತ್ತದೆ.
ಒಟ್ಟಾರೆ ಅಯೋಮಯ ಕೋಲಾರ ಜಿಲ್ಲೆಯ ದೈನಿಕ ಬದುಕಿನ ಶನಿವಾರದ ಸಂಜೆಯನ್ನು ವಿಚಾರಪ್ರಚೋದಕ ವನ್ನಾಗಿಸಿದೆ.ಈ ನಾಟಕದ ಆಗುವಿಕೆಗೆ ಕಾರಣರಾದ ಚಾಂದಿನಿ ಬಳಗ ಹಾಗೂ ಸಮಸ್ತರೂ ಅಭಿನಂದನೆಗೆ ಸದಾ ಹಕ್ಕುದಾರರು. ಕೋಲಾರ ಜಿಲ್ಲೆಗೆ ಇಂಥ ಒಂದು ನಾಟಕದ ಪ್ರದರ್ಶಕ ರಂಗಕಲೆಗೆ ಪುನರ್ ರೂಪೀಕರಣದ ಹೆಜ್ಜೆಯಾಗಿ ಮಹತ್ವಪೂರ್ಣ ಎನ್ನಲು ಶಂಕೆ ಇಲ್ಲ.